ನೀವು ಕಳೆದ ಎಪ್ರಿಲ್‌ನಲ್ಲಿ ಹೊಸನಗರದಲ್ಲಿ ಜರುಗಿದ ವಿಶ್ವ ಗೋ ಸಮ್ಮೇಳನಕ್ಕೆ ಬಂದವರಾಗಿದ್ದರೆ, ಸಭಾಂಗಣದ ಮಧ್ಯದಲ್ಲಿ, ಸಮ್ಮೇಳನಕ್ಕಾಗಿ ಬಂದ ದೈವಪ್ರತಿನಿದಿಯೋ ಎಂಬಂತೆ ಶಾಂತ, ಗಂಭೀರ ಸ್ವಭಾವಗಳ ಮೂರ್ತ ರೂಪವಾದ ಹೋರಿಯೊಂದನ್ನು ನೋಡಿರುತ್ತೀರಿ, ಕಣ್ಣರಳಿಸಿರುತ್ತೀರಿ, ಸ್ಥಂಬೀಭೂತರಾಗಿರುತ್ತೀರಿ, ‘ಒಹ್’ ಎನ್ನುವಂತದ್ದೊಂದು ಉದ್ಗಾರ ಹೊರಡಿಸಿರುತ್ತೀರಿ. ಆಸ್ತಿಕರಾದರೆ ಪ್ರತ್ಯಕ್ಷ ನಂದಿಯನ್ನೆ ಕಂಡೆನೋ ಎನ್ನುವ ದಿವ್ಯ ಆನಂದವೊಂದು ನಿಮ್ಮ ಹೃದಯವನ್ನು ತುಂಬಿರಲೂ ಸಾಕು. ಹಾಗೆ ಕೇವಲ ಉಪಸ್ಥಿತಿಯೊಂದರಿಂದಲೆ ನೋಟಕನ ಗೋಪ್ರೇಮವನ್ನು ಜಾಗೃತಗೊಳಿಸಬಲ್ಲ ಆ ನಂದಿಯ ಹೆಸರು “ಸಾಮ್ರಾಟ್”!
ಸಾಮ್ರಾಟ್ ಭಾರತದ ಅಳಿದುಳಿದ ೩೨ ಅತ್ಯಮೂಲ್ಯ ತಳಿಗಳಲ್ಲೊಂದಾದ ಕಾಂಕ್ರೇಜ್ ಜಾತಿಗೆ ಸೇರಿದ್ದು. ಅಹ್ಮದಾಬಾದ್‌ನ ಶ್ರೀ ಜಗನ್ನಾಥ ಮಂದಿರದ ಗೋಶಾಲೆಯಲ್ಲಿ ಗಾಡಿ ಎಳೆಯುತ್ತಿದ್ದ ಈ ಚೆಲುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಚಿತ್ತವನ್ನು ಮೊದಲ ನೋಟಕ್ಕೇ ಸೆಳೆದುದರಿಂದ ಕಳೆದ ಮಾರ್ಚಿನಲ್ಲಿ ಶ್ರೀಮಠಕ್ಕೆ ಈತನ ಬರೋಣವಾಯಿತು. ಭಯಹುಟ್ಟಿಸುವಂತೆ ೭-೮ ಅಡಿಗಳಷ್ಟು ಎತ್ತರ, ಒಂದು ಮೀಟರ್‌ನಷ್ಟು ಕೋಡು ಹೊಂದಿದ್ದರೂ ಪರಮ ಶಾಂತ ಸ್ವಭಾವದ ೧೮ರ ಹರೆಯದ ಈತ ಬಂದ ಕೆಲದಿನಗಳಲ್ಲೇ ಶ್ರೀಮಠದ ಭಕ್ತರ ಅಚ್ಚುಮೆಚ್ಚಿನವನಾಗಿದ್ದ.
ಕಾಂಕ್ರೇಜ್ ತಳಿಯ ಗೋವುಗಳೆ ಹಾಗೆ, ಬೃಹದಾಕಾರವಾದರೂ ಅತ್ಯಂತ ಶಾಂತ ಸ್ವಭಾವದವು. ಭಾರತದ ಮೂಲ ತಳಿಗಳಲ್ಲಿ ಕಾಂಕ್ರೇಜ್ ಕೂಡ ಒಂದು. ಶಿಲಾಯುಗದ ಕೆತ್ತನೆಗಳಲ್ಲಿ, ಹರಪ್ಪಾ –ಮೊಹಂಜದಾರೊನ ಶಿಲ್ಪಗಳಲ್ಲಿ ಕಾಣಸಿಗುವ ಗೋವಿನ ಚಿತ್ರ ಕಾಂಕ್ರೇಜ್‌ನದೇ ಎಂಬುದಕ್ಕೆ ಅಧಾರಗಳಿವೆ. ಸಾಮಾನ್ಯವಾಗಿ ಬೂದು, ಅಪರೂಪಕ್ಕೆ ನಸುಕಪ್ಪು ಬಣ್ಣದ ಇವುಗಳು ಉಬ್ಬಿದಂತಿರುವ ಸಣ್ಣ ಮೂಗು, ನೀಳವಾದ ನೇತಾಡುವ ಕಿವಿ, ಗಟ್ಟಿಯಾದ ನಿಡಿದಾದ ಕೊಂಬನ್ನು ಹೊಂದಿರುತ್ತವೆ. ಹೋರಿಗಳು ಭುಜ, ತೊಡೆ ಮತ್ತು ಕಾಲುಗಳಲ್ಲಿ ಕಪ್ಪು ಬಣ್ಣ ಹೊಂದಿರುವುದು ವಿಶೇಷ.
ಗುಜರಾತ್‌ನ ಕಛ್ ಹಾಗು ರಾಜಸ್ಥಾನದ ಜೋಧಪುರ ಪ್ರಾಂತ್ಯ ಇವುಗಳ ತವರೂರು. ಈ ತಳಿಯ ಗೋವುಗಳನ್ನು ಕೆಲಸಗಾರ ತಳಿಯಾಗಿಯೂ ಹಾಲಿನ ತಳಿಯಾಗಿಯೂ (ಉಭಯ) ಬಳಸಬಹುದೆನ್ನುತ್ತಾರೆ ಅಲ್ಲಿನ ಸಂತೃಪ್ತ ಹೈನುಗಾರರು. ಅಲ್ಲಿಂದ ಶ್ರೀಮಠ ನೂರಕ್ಕೂ ಹೆಚ್ಚಿನ ಗೊವುಗಳನ್ನು ತಂದು ರಾಜ್ಯದಾದ್ಯಂತ ವಿತರಿಸಿದೆ. ರಾಜಸ್ತಾನದಲ್ಲಿ ದಿನಕ್ಕೆ ೮-೧೦ ಲೀಟರ್‌ಗಳಷ್ಟು ಹಾಲು ಸುರಿಸುವ ಇವು ಕರ್ನಾಟಕದಲ್ಲಿ ೧೦-೧೨ ಲೀಟರ್ ಕೊಡುತ್ತಿರುವ ಉದಾಹರಣೆಗಳಿವೆ ಎಂದು ತಿಳಿದರೆ ಕವಿಗಳು “ಜೇನಿನ ಹೊಳೆಯೋ, ಹಾಲಿನ ಮಳೆಯೊ” ಎಂದು ಕೌಳಿಗೆ ಹಾಲು ಕುಡಿದು ಉಚ್ಚ ಕಂಠದಿಂದ ಹಾಡಿಯಾರು!
ವಿಶ್ವದ ಅತ್ಯಂತ ದೊಡ್ಡ ಗೋಶಾಲೆ ಫತಮೆಡಾದ ಶ್ರೀ ಗೊಪಾಲ ಗೋವರ್ಧನ ಗೋಧಾಮದಲ್ಲಿ ಎರಡು ವರ್ಷಕ್ಕೆ ಮೊದಲು ಕಾಂಕ್ರೇಜ್ ತಳಿಯ ಗೋವುಗಳು ಸುಮಾರು ಎರಡೂವರೆ ಲಕ್ಷದಷ್ಟಿದ್ದವು. ಇತ್ತೀಚಿನ ಉತ್ತಮ ೨ ಮಳೆಗಾಲದ ನಂತರ ರೈತರುಗಳು ಇಲ್ಲಿಂದ ಈ ಗೋವುಗಳನ್ನು ತೆಗೆದುಕೊಂಡು ಹೋದುದರಿಂದ ಅವುಗಳ ಸಂಖ್ಯೆ ಒಂದು ಲಕ್ಷಕ್ಕಿಳಿದಿವೆ. ವಿದೇಶಿ ತಳಿಗಳ ಭರಾಟೆಯ ಮಧ್ಯದಲ್ಲೂ ಇವುಗಳ ಪ್ರಭಾವ ಅದೆಷ್ಟಿದೆಯೆಂದು ಇದರಿಂದ ಅಂದಾಜಿಸಬಹುದು.
No comments:
Post a Comment