ಮೊನ್ನೆ ಕಾಮದುಘಾ ಕಾರ್ಯಕರ್ತ ಸದಾಶಿವ ಮೊಂತಿಮಾರ್ ಅವರನ್ನು ಮಾಸದ ಗೋವು ಅಂಕಣದ ವಿಚಾರವಾಗಿ ಸಂಪರ್ಕಿಸಿದಾಗ ಅಘಾತಕಾರಿ ವಿಚಾರ ಒಂದನ್ನು ಹೇಳಿದರು. ಅದು ಭಾರತೀಯ ಗೋತಳಿ ಕೃಷ್ಣಾ ಅಥವಾ ಕೃಷ್ಣಾತೀರಿ ವಿನಾಶದ ತುತ್ತತುದಿಯಲ್ಲಿರುವ ಬಗ್ಗೆ. ಒಂದು ಕಾಲದಲ್ಲಿ ಕೃಷ್ಣಾತೀರಪ್ರದೇಶದ ಕಲ್ಲು ಮಿಶ್ರಿತ ಕಪ್ಪು ಮಣ್ಣಿನಲ್ಲಿ ಬೇಸಾಯ ಮಾಡುವುದೇ ಒಂದು ಸವಾಲು ಎಂದೆನಿಸಿದ್ದಾಗ ರೈತರ ಜೀವನನಿರ್ವಹಣೆಯ ನೊಗಕ್ಕೆ ತಾವೂ ಹೆಗಲು ಕೊಟ್ಟು, ಅಲ್ಲಿನ ಕೃಷಿಪದ್ಧತಿಯ ಜೀವನಾಡಿ ಎನಿಸಿ, ರೈತರ ಮೊಗದಲ್ಲಿ ನಗುವರಳಿಸಿದ್ದ ಕೃಷ್ಣಾ ತಳಿ ವಿನಾಶದ ಅಂಚಿಗೆ ಸರಿದು ಈಗ, ಕಷ್ಠಪಟ್ಟು ಹುಡುಕಿದರೆ ೩೦-೩೫ ಹಸುಗಳು, ೫-೬ ಹೋರಿಗಳಷ್ಟೆ ಇವೆ ಎಂಬ ಹಂತ ತಲುಪಿದೆ ಎಂದು ತಿಳಿಸುವಾಗ ಆ ಗೋಪ್ರೇಮಿಯ ಧ್ವನಿಯಲ್ಲಿ ಕಳವಳದ ನಡುಕ....
ಕೃಷ್ಣಾ ನದಿಯ ದಂಡೆಗುಂಟ ಇರುವ ವಿಶಿಷ್ಟ ಕಪ್ಪು ಕಲ್ಲು ಮಣ್ಣಿಗೆ, ಘೋರ ಬಿಸಿಲಿಗೆ ಹೂಟೆ ಮಾಡುವುದೇ ಒಂದು ಸಮಸ್ಯೆ ಅಂತಾಗಿ ಕಷ್ಟಸಹಿಷ್ಣುತಳಿಯೊಂದರ ಅನ್ವೇಷಣೆಯಲ್ಲಿ ದೊರಕಿದ್ದು ಕೃಷ್ಣಾ ಅಥವಾ ಕೃಷ್ಣಾತೀರಿ. ಹತ್ತೊಂಬತ್ತನೆ ಶತಮಾನದ ಆದಿಯಿಂದಲೂ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿ ತೀರಪ್ರದೇಶ ಅಂದರೆ ಮಹಾರಾಷ್ಟ್ರದ ಮೀರಜ್,ಸಾಂಗ್ಲಿ, ಕೊಲ್ಲಾಪುರ ಕರ್ನಾಟಕದ ಜಮಖಂಡಿ, ಬೆಳಗಾವಿ, ರಾಯಚೂರು ಪ್ರದೇಶದ ಜೀವನಾಡಿಯಾಗಿದ್ದವು ಕೃಷ್ಣಾ ತಳಿಯ ಗೋವುಗಳು. ಮಹಾರಾಷ್ಟ್ರದ ಸಾಂಗ್ಲಿ ಮಹಾರಾಜ ಇದರ ಮುಖ್ಯ ಪೋಷಕ.
ಅತಿಊಷ್ಣ ಹವಮಾನದಲ್ಲೂ ವಿರಾಮವಿಲ್ಲದೆ ೨೫-೩೦ ಕಿ.ಮಿ. ನಡೆಯಬಲ್ಲ ಇವುಗಳ ಕಷ್ಟಸಹಿಷ್ಣುತೆ,
೨ ಟನ್ನಿನವರೆಗೂ ಭಾರ ಎಳೆಯಬಲ್ಲ ಸಾಮರ್ಥ್ಯ, ಅತಿ ಕಡಿಮೆ ಆಹಾರ ಸೇವಿಸಿ ದಿನಕ್ಕೆ ೮-೧೦ ತಾಸು ದುಡಿಯಬಲ್ಲ ಗುಣಗಳಿಂದ ಕೃಷ್ಣಾ, ಇಂದಿಗೂ ಸಣ್ಣ ಮತ್ತು ಮಧ್ಯಮ ರೈತರಿಗೆ ವರದಾನ. ಬೆವರಿನ ಗ್ರಂಥಿಗಳ ಸಾಂದ್ರತೆ, ಶರೀರ ರಚನೆ ಮುಖ್ಯವಾಗಿ ಗೊರಸಿನ ರಚನೆ ಈ ಭಾಗದ ನೆಲಕ್ಕೆ, ಹವಾಗುಣಕ್ಕೆ ಅತ್ಯಂತ ಸೂಕ್ತ. ಸಂತಾನದ ಅವಧಿ ಕೂಡ ದೊಡ್ಡದೇ, ವರ್ಷಕ್ಕೊಂದರಂತೆ ೯-೧೨ ಕರು ಈಯಬಲ್ಲವು. ಹಾಲು ದಿನಕ್ಕೆ ನಾಲ್ಕರಿಂದ ಐದು ಲೀಟರ್. ನೆಲ ಮುಟ್ಟುವಂತಿರುವ ಬಾಲ, ಸಣ್ಣ ಕಿವಿ, ಅಗಲ ಹಣೆ, ಒಳಚಾಚಿಕೊಂಡಂತಿರುವ ಕೊಂಬು ಹೊಂದಿದೆ ಕೃಷ್ಣಾ. ತಮ್ಮ ವೈಶಿಷ್ಟ್ಯತೆಗಳಿಂದ ವಿದೇಶಿಯರನ್ನೂ ಸೆಳೆದ ಇವು ಬ್ರೆಜ಼ಿಲ್, ದ.ಅಮೆರಿಕ ದೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ರಫ್ತಾಗಿವೆ.
ಇಷ್ಟೆಲ್ಲ ಗುಣವಿಶೇಷಗಳನ್ನು ಹೊಂದಿದ್ದರೂ ಹಿತ್ತಲ ಗಿಡ ಮದ್ದಲ್ಲ ಎನ್ನುವ ಮನೋಭಾವಕ್ಕೆ ತುತ್ತಾಗಿ
ಅವನತಿಯ ಅಂಚಿಗೆ ಕೃಷ್ಣಾ ಸರಿದಿರುವುದು ಖೇದಕರ.National Dairy research institute(NDRI), Indian Council oF Agricultural Research(ICAR) , ಜೊತೆಗೆ ಶ್ರೀರಾಮಚಂದ್ರಾಪುರ ಮಠ ಈ ತಳಿಯ ರಕ್ಷಣೆಗೆ ಸಮರೊಪಾದಿಯಲ್ಲಿ ಸಜ್ಜಾಗಿವೆ. ಕೃಷ್ಣಾತೀರಿಯ ಕರೆಗೆ ನಾವೂ ಓಗೊಡೊಣ ಅಲ್ಲವೆ?
No comments:
Post a Comment