Wednesday, March 24, 2010

ಗೋ ’ಸಾಮ್ರಾಟ್’ ಕಾಂಕ್ರ‍ೇಜ್!

ನೀವು ಕಳೆದ ಎಪ್ರಿಲ್‌ನಲ್ಲಿ ಹೊಸನಗರದಲ್ಲಿ ಜರುಗಿದ ವಿಶ್ವ ಗೋ ಸಮ್ಮೇಳನಕ್ಕೆ ಬಂದವರಾಗಿದ್ದರೆ, ಸಭಾಂಗಣದ ಮಧ್ಯದಲ್ಲಿ, ಸಮ್ಮೇಳನಕ್ಕಾಗಿ ಬಂದ ದೈವಪ್ರತಿನಿದಿಯೋ ಎಂಬಂತೆ ಶಾಂತ, ಗಂಭೀರ ಸ್ವಭಾವಗಳ ಮೂರ್ತ ರೂಪವಾದ ಹೋರಿಯೊಂದನ್ನು ನೋಡಿರುತ್ತೀರಿ, ಕಣ್ಣರಳಿಸಿರುತ್ತೀರಿ, ಸ್ಥಂಬೀಭೂತರಾಗಿರುತ್ತೀರಿ, ‘ಒಹ್’ ಎನ್ನುವಂತದ್ದೊಂದು ಉದ್ಗಾರ ಹೊರಡಿಸಿರುತ್ತೀರಿ. ಆಸ್ತಿಕರಾದರೆ ಪ್ರತ್ಯಕ್ಷ ನಂದಿಯನ್ನೆ ಕಂಡೆನೋ ಎನ್ನುವ ದಿವ್ಯ ಆನಂದವೊಂದು ನಿಮ್ಮ ಹೃದಯವನ್ನು ತುಂಬಿರಲೂ ಸಾಕು. ಹಾಗೆ ಕೇವಲ ಉಪಸ್ಥಿತಿಯೊಂದರಿಂದಲೆ ನೋಟಕನ ಗೋಪ್ರೇಮವನ್ನು ಜಾಗೃತಗೊಳಿಸಬಲ್ಲ ಆ ನಂದಿಯ ಹೆಸರು  “ಸಾಮ್ರಾಟ್”!

kankrej


ಸಾಮ್ರಾಟ್ ಭಾರತದ ಅಳಿದುಳಿದ ೩೨ ಅತ್ಯಮೂಲ್ಯ ತಳಿಗಳಲ್ಲೊಂದಾದ ಕಾಂಕ್ರೇಜ್ ಜಾತಿಗೆ ಸೇರಿದ್ದು. ಅಹ್ಮದಾಬಾದ್‌ನ ಶ್ರೀ ಜಗನ್ನಾಥ ಮಂದಿರದ ಗೋಶಾಲೆಯಲ್ಲಿ ಗಾಡಿ ಎಳೆಯುತ್ತಿದ್ದ ಈ ಚೆಲುವ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಚಿತ್ತವನ್ನು ಮೊದಲ ನೋಟಕ್ಕೇ ಸೆಳೆದುದರಿಂದ ಕಳೆದ ಮಾರ್ಚಿನಲ್ಲಿ ಶ್ರೀಮಠಕ್ಕೆ ಈತನ ಬರೋಣವಾಯಿತು. ಭಯಹುಟ್ಟಿಸುವಂತೆ ೭-೮ ಅಡಿಗಳಷ್ಟು ಎತ್ತರ, ಒಂದು ಮೀಟರ್‌ನಷ್ಟು ಕೋಡು ಹೊಂದಿದ್ದರೂ ಪರಮ ಶಾಂತ ಸ್ವಭಾವದ ೧೮ರ ಹರೆಯದ ಈತ ಬಂದ ಕೆಲದಿನಗಳಲ್ಲೇ ಶ್ರೀಮಠದ ಭಕ್ತರ ಅಚ್ಚುಮೆಚ್ಚಿನವನಾಗಿದ್ದ. 


ಕಾಂಕ್ರೇಜ್ ತಳಿಯ ಗೋವುಗಳೆ  ಹಾಗೆ, ಬೃಹದಾಕಾರವಾದರೂ ಅತ್ಯಂತ ಶಾಂತ  ಸ್ವಭಾವದವು. ಭಾರತದ ಮೂಲ ತಳಿಗಳಲ್ಲಿ ಕಾಂಕ್ರೇಜ್ ಕೂಡ ಒಂದು. ಶಿಲಾಯುಗದ ಕೆತ್ತನೆಗಳಲ್ಲಿ, ಹರkankrej-bull-copy-300x293ಪ್ಪಾ –ಮೊಹಂಜದಾರೊನ ಶಿಲ್ಪಗಳಲ್ಲಿ ಕಾಣಸಿಗುವ ಗೋವಿನ ಚಿತ್ರ ಕಾಂಕ್ರೇಜ್‌ನದೇ ಎಂಬುದಕ್ಕೆ ಅಧಾರಗಳಿವೆ. ಸಾಮಾನ್ಯವಾಗಿ ಬೂದು, ಅಪರೂಪಕ್ಕೆ ನಸುಕಪ್ಪು ಬಣ್ಣದ ಇವುಗಳು ಉಬ್ಬಿದಂತಿರುವ ಸಣ್ಣ ಮೂಗು, ನೀಳವಾದ ನೇತಾಡುವ ಕಿವಿ, ಗಟ್ಟಿಯಾದ ನಿಡಿದಾದ ಕೊಂಬನ್ನು ಹೊಂದಿರುತ್ತವೆ. ಹೋರಿಗಳು ಭುಜ, ತೊಡೆ ಮತ್ತು ಕಾಲುಗಳಲ್ಲಿ ಕಪ್ಪು ಬಣ್ಣ ಹೊಂದಿರುವುದು ವಿಶೇಷ.
ಗುಜರಾತ್‌ನ ಕಛ್ ಹಾಗು ರಾಜಸ್ಥಾನದ ಜೋಧಪುರ  ಪ್ರಾಂತ್ಯ ಇವುಗಳ ತವರೂರು. ಈ ತಳಿಯ ಗೋವುಗಳನ್ನು ಕೆಲಸಗಾರ ತಳಿಯಾಗಿಯೂ ಹಾಲಿನ ತಳಿಯಾಗಿಯೂ (ಉಭಯ) ಬಳಸಬಹುದೆನ್ನುತ್ತಾರೆ ಅಲ್ಲಿನ ಸಂತೃಪ್ತ ಹೈನುಗಾರರು. ಅಲ್ಲಿಂದ ಶ್ರೀಮಠ ನೂರಕ್ಕೂ ಹೆಚ್ಚಿನ ಗೊವುಗಳನ್ನು ತಂದು ರಾಜ್ಯದಾದ್ಯಂತ ವಿತರಿಸಿದೆ.  ರಾಜಸ್ತಾನದಲ್ಲಿ ದಿನಕ್ಕೆ  ೮-೧೦ ಲೀಟರ್‌ಗಳಷ್ಟು  ಹಾಲು ಸುರಿಸುವ ಇವು ಕರ್ನಾಟಕದಲ್ಲಿ ೧೦-೧೨ ಲೀಟರ್ ಕೊಡುತ್ತಿರುವ ಉದಾಹರಣೆಗಳಿವೆ ಎಂದು ತಿಳಿದರೆ ಕವಿಗಳು  “ಜೇನಿನ ಹೊಳೆಯೋ, ಹಾಲಿನ ಮಳೆಯೊ” ಎಂದು ಕೌಳಿಗೆ ಹಾಲು ಕುಡಿದು ಉಚ್ಚ ಕಂಠದಿಂದ ಹಾಡಿಯಾರು!
ವಿಶ್ವದ ಅತ್ಯಂತ ದೊಡ್ಡ ಗೋಶಾಲೆ ಫತಮೆಡಾದ  ಶ್ರೀ ಗೊಪಾಲ ಗೋವರ್ಧನ ಗೋಧಾಮದಲ್ಲಿ ಎರಡು ವರ್ಷಕ್ಕೆ ಮೊದಲು ಕಾಂಕ್ರೇಜ್ ತಳಿಯ ಗೋವುಗಳು ಸುಮಾರು ಎರಡೂವರೆ ಲಕ್ಷದಷ್ಟಿದ್ದವು. ಇತ್ತೀಚಿನ ಉತ್ತಮ ೨ ಮಳೆಗಾಲದ ನಂತರ ರೈತರುಗಳು ಇಲ್ಲಿಂದ ಈ ಗೋವುಗಳನ್ನು ತೆಗೆದುಕೊಂಡು ಹೋದುದರಿಂದ ಅವುಗಳ ಸಂಖ್ಯೆ ಒಂದು ಲಕ್ಷಕ್ಕಿಳಿದಿವೆ. ವಿದೇಶಿ ತಳಿಗಳ ಭರಾಟೆಯ ಮಧ್ಯದಲ್ಲೂ ಇವುಗಳ ಪ್ರಭಾವ ಅದೆಷ್ಟಿದೆಯೆಂದು ಇದರಿಂದ ಅಂದಾಜಿಸಬಹುದು.

Thursday, March 18, 2010

ಕೃಷ್ಣಾಕ್ಕೆ ಬೇಕಾಗಿದೆ ತುರ್ತಾಗಿ ರಕ್ಷಣೆ



ಮೊನ್ನೆ ಕಾಮದುಘಾ ಕಾರ್ಯಕರ್ತ ಸದಾಶಿವ ಮೊಂತಿಮಾರ್ ಅವರನ್ನು ಮಾಸದ ಗೋವು ಅಂಕಣದ ವಿಚಾರವಾಗಿ ಸಂಪರ್ಕಿಸಿದಾಗ ಅಘಾತಕಾರಿ ವಿಚಾರ ಒಂದನ್ನು ಹೇಳಿದರು. ಅದು ಭಾರತೀಯ ಗೋತಳಿ ಕೃಷ್ಣಾ ಅಥವಾ ಕೃಷ್ಣಾತೀರಿ ವಿನಾಶದ ತುತ್ತತುದಿಯಲ್ಲಿರುವ ಬಗ್ಗೆ. ಒಂದು ಕಾಲದಲ್ಲಿ ಕೃಷ್ಣಾತೀರಪ್ರದೇಶದ ಕಲ್ಲು ಮಿಶ್ರಿತ ಕಪ್ಪು ಮಣ್ಣಿನಲ್ಲಿ ಬೇಸಾಯ ಮಾಡುವುದೇ ಒಂದು ಸವಾಲು ಎಂದೆನಿಸಿದ್ದಾಗ ರೈತರ ಜೀವನನಿರ್ವಹಣೆಯ ನೊಗಕ್ಕೆ ತಾವೂ ಹೆಗಲು ಕೊಟ್ಟು, ಅಲ್ಲಿನ ಕೃಷಿಪದ್ಧತಿಯ ಜೀವನಾಡಿ ಎನಿಸಿ, ರೈತರ ಮೊಗದಲ್ಲಿ ನಗುವರಳಿಸಿದ್ದ ಕೃಷ್ಣಾ ತಳಿ ವಿನಾಶದ ಅಂಚಿಗೆ ಸರಿದು ಈಗ, ಕಷ್ಠಪಟ್ಟು ಹುಡುಕಿದರೆ ೩೦-೩೫ ಹಸುಗಳು, ೫-೬ ಹೋರಿಗಳಷ್ಟೆ ಇವೆ ಎಂಬ ಹಂತ ತಲುಪಿದೆ ಎಂದು ತಿಳಿಸುವಾಗ ಆ ಗೋಪ್ರೇಮಿಯ ಧ್ವನಿಯಲ್ಲಿ ಕಳವಳದ ನಡುಕ....
ಕೃಷ್ಣಾ ನದಿಯ ದಂಡೆಗುಂಟ ಇರುವ ವಿಶಿಷ್ಟ ಕಪ್ಪು ಕಲ್ಲು ಮಣ್ಣಿಗೆ, ಘೋರ ಬಿಸಿಲಿಗೆ ಹೂಟೆ ಮಾಡುವುದೇ ಒಂದು ಸಮಸ್ಯೆ ಅಂತಾಗಿ ಕಷ್ಟಸಹಿಷ್ಣುತಳಿಯೊಂದರ ಅನ್ವೇಷಣೆಯಲ್ಲಿ ದೊರಕಿದ್ದು ಕೃಷ್ಣಾ ಅಥವಾ ಕೃಷ್ಣಾತೀರಿ. ಹತ್ತೊಂಬತ್ತನೆ ಶತಮಾನದ ಆದಿಯಿಂದಲೂ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿ ತೀರಪ್ರದೇಶ ಅಂದರೆ ಮಹಾರಾಷ್ಟ್ರದ ಮೀರಜ್,ಸಾಂಗ್ಲಿ, ಕೊಲ್ಲಾಪುರ ಕರ್ನಾಟಕದ ಜಮಖಂಡಿ, ಬೆಳಗಾವಿ, ರಾಯಚೂರು ಪ್ರದೇಶದ ಜೀವನಾಡಿಯಾಗಿದ್ದವು ಕೃಷ್ಣಾ ತಳಿಯ ಗೋವುಗಳು. ಮಹಾರಾಷ್ಟ್ರದ ಸಾಂಗ್ಲಿ ಮಹಾರಾಜ ಇದರ ಮುಖ್ಯ ಪೋಷಕ.

ಅತಿಊಷ್ಣ ಹವಮಾನದಲ್ಲೂ ವಿರಾಮವಿಲ್ಲದೆ ೨೫-೩೦ ಕಿ.ಮಿ. ನಡೆಯಬಲ್ಲ ಇವುಗಳ ಕಷ್ಟಸಹಿಷ್ಣುತೆ,
೨ ಟನ್ನಿನವರೆಗೂ ಭಾರ ಎಳೆಯಬಲ್ಲ ಸಾಮರ್ಥ್ಯ, ಅತಿ ಕಡಿಮೆ ಆಹಾರ ಸೇವಿಸಿ ದಿನಕ್ಕೆ ೮-೧೦ ತಾಸು ದುಡಿಯಬಲ್ಲ ಗುಣಗಳಿಂದ ಕೃಷ್ಣಾ, ಇಂದಿಗೂ ಸಣ್ಣ ಮತ್ತು ಮಧ್ಯಮ ರೈತರಿಗೆ ವರದಾನ. ಬೆವರಿನ ಗ್ರಂಥಿಗಳ ಸಾಂದ್ರತೆ, ಶರೀರ ರಚನೆ ಮುಖ್ಯವಾಗಿ ಗೊರಸಿನ ರಚನೆ ಈ ಭಾಗದ ನೆಲಕ್ಕೆ, ಹವಾಗುಣಕ್ಕೆ ಅತ್ಯಂತ ಸೂಕ್ತ. ಸಂತಾನದ ಅವಧಿ ಕೂಡ ದೊಡ್ಡದೇ, ವರ್ಷಕ್ಕೊಂದರಂತೆ ೯-೧೨ ಕರು ಈಯಬಲ್ಲವು. ಹಾಲು ದಿನಕ್ಕೆ ನಾಲ್ಕರಿಂದ ಐದು ಲೀಟರ್. ನೆಲ ಮುಟ್ಟುವಂತಿರುವ ಬಾಲ, ಸಣ್ಣ ಕಿವಿ, ಅಗಲ ಹಣೆ, ಒಳಚಾಚಿಕೊಂಡಂತಿರುವ ಕೊಂಬು ಹೊಂದಿದೆ ಕೃಷ್ಣಾ. ತಮ್ಮ ವೈಶಿಷ್ಟ್ಯತೆಗಳಿಂದ ವಿದೇಶಿಯರನ್ನೂ ಸೆಳೆದ ಇವು ಬ್ರೆಜ಼ಿಲ್, ದ.ಅಮೆರಿಕ ದೇಶಗಳಿಗೆ ದೊಡ್ಡ ಸಂಖ್ಯೆಯಲ್ಲಿ ರಫ್ತಾಗಿವೆ.


ಇಷ್ಟೆಲ್ಲ ಗುಣವಿಶೇಷಗಳನ್ನು ಹೊಂದಿದ್ದರೂ ಹಿತ್ತಲ ಗಿಡ ಮದ್ದಲ್ಲ ಎನ್ನುವ ಮನೋಭಾವಕ್ಕೆ ತುತ್ತಾಗಿ
ಅವನತಿಯ ಅಂಚಿಗೆ ಕೃಷ್ಣಾ ಸರಿದಿರುವುದು ಖೇದಕರ.National Dairy research institute(NDRI), Indian Council oF Agricultural Research(ICAR) , ಜೊತೆಗೆ ಶ್ರೀರಾಮಚಂದ್ರಾಪುರ ಮಠ ಈ ತಳಿಯ ರಕ್ಷಣೆಗೆ ಸಮರೊಪಾದಿಯಲ್ಲಿ ಸಜ್ಜಾಗಿವೆ. ಕೃಷ್ಣಾತೀರಿಯ ಕರೆಗೆ ನಾವೂ ಓಗೊಡೊಣ ಅಲ್ಲವೆ?